Basadi 08 | Town / Matha precinct

Achiyakka Basadi (Akkana Basadi)

ಆಚಿಯಕ್ಕನ ಬಸದಿ (ಅಕ್ಕನ ಬಸದಿ)

ಶ್ರವಣಬೆಳಗೊಳದ ಉತ್ತರಕ್ಕೆ ಎಲ್ಲೆಯಾಗಿರುವ ಅಕ್ಕನ ಬಸದಿಯನ್ನು ಇಮ್ಮಡಿ ಬಲ್ಲಾಳನ ಮಂತ್ರಿಯಾಗಿದ್ದ ಚಂದ್ರಮೌಳಿಯ ಪತ್ನಿ ಹಾಗೂ ಬಾಳಚಂದ್ರ ಮುನಿಗಳ ಶಿಷ್ಯೆ ಆಚಿಯಕ್ಕ ಕ್ರಿ.ಶ. 1181ರಲ್ಲಿ ಕಟ್ಟಿಸಿ, ಇದರ ನಿರ್ವಹಣೆಗೆ ಬೊಮ್ಮೆಯನಹಳ್ಳಿಯನ್ನು ದಾನವಾಗಿ ನೀಡಿರುವುದಾಗಿ ತಿಳಿದುಬರುತ್ತದೆ. ‘ಆಚಿಯಕ್ಕನ ಬಸದಿ’ ಹೆಸರು ಮೊಟಕಾಗಿ ಅಕ್ಕನ ಬಸದಿ ಎಂದು ಪ್ರಚಲಿತವಾಗಿದೆ. ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿರುವ ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಈ ಬಸದಿಯನ್ನು ಬಳಪದ ಕಲ್ಲಿನಲ್ಲಿ ನಿರ್ಮಿಸಿದ ಶಿಲ್ಪಿಗಳ ನೈಪುಣ್ಯ ಶ್ಲಾಘನೀಯ.ಗರ್ಭಗೃಹದಲ್ಲಿ ಆರು ಅಡಿ, ನಾಲ್ಕು ಅಂಗುಲ ಎತ್ತರದ ಅತಿ ಸುಂದರ ಭ. ಶ್ರೀ 1008 ಪಾಶ್ರ್ವನಾಥ ತೀರ್ಥಂಕರರ ಕಾಯೋತ್ಸರ್ಗ ಬಿಂಬ ಪ್ರತಿಷ್ಠಾಪಿತವಾಗಿದೆ. ಗರ್ಭಗುಡಿಯ ಮುಂದಣ ಸುಖನಾಸಿಯಲ್ಲಿ ಬಲಕ್ಕೆ ಧರಣೇಂದ್ರ ಮತ್ತು ಎಡಕ್ಕೆ ಪದ್ಮಾವತೀ ದೇವಿಯ ಮೂರ್ತಿ ಇವೆ. ಚತುರ್ಭುಜರಾದ ಈ ಯಕ್ಷ-ಯಕ್ಷಿಯರು ಅಡಿಯಿಂದ ಮುಡಿಯವರೆಗೆ ಸಾಲಂಕೃತರಾಗಿದ್ದಾರೆ. ಅವರ ಆಭರಣಗಳ ಕೆತ್ತನೆಯ ಕೌಶಲ್ಯ ಮನಮೋಹಕವಾಗಿದೆ. ಸುಖಾಸನ ಮತ್ತು ಲಲಿತಾಸನದಲ್ಲಿ ಕುಳಿತಿರುವ ಈ ದೇವ ದೇವಿಯರ ಪ್ರಭಾವಳಿಯ ಬಳ್ಳಿಯಲಂಕಾರ ಒಪ್ಪವಾಗಿದೆ. ಅಂಕುಶ, ಪಾಶ, ವಜ್ರದಂಡ, ಬೀಜಪೂರ - ಇವು ಕ್ರಮವಾಗಿ ನಾಲ್ಕು ಕೈಗಳಲ್ಲಿವೆ. ನವರಂಗದಲ್ಲಿ ಕಡುನೀಲಿ, ಹೊಳಪು ಹಾಗೂ ನುಣುಪು ಕಲ್ಲಿನ ಗಂಟೆಯಾಕಾರದ ಶ್ರೀಕಾರ ಕಂಬಗಳು ಚೆಲುವಾಗಿವೆ. ಸುಂದರ ಅಲಂಕೃತ ಒಳಮಾಳಿಗೆಯು ಭುವನೇಶ್ವರಿಯ ಪದ್ಮಶಿಲಾ ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ. ಬಸದಿಯ ಹೊರಮೈ, ವಿಮಾನ, ಸ್ತಂಭ, ಅಧಿಷ್ಠಾನಗಳು ಬಸದಿಯ ಸೌಂದರ್ಯವನ್ನು ಬೆಳಗಿಸಿವೆ. ಅಕ್ಕನ ಬಸದಿಯ ಅಪೂರ್ವತೆಗೆ ಸಾಕ್ಷಿಯಾಗಿ ನಿಂತಿರುವ ಇನ್ನೆರಡು ಸಂಗತಿಗಳೆಂದರೆ ಮುಂಭಾಗದಲ್ಲಿರುವ ಗೋಪುರ ಮತ್ತು ಶಾಸನ. ಭವ್ಯವಾಗಿ ಎದ್ದು ಕಾಣುವ ಹದಿನೆಂಟು ಅಡಿ ಗೋಪುರವು ಸೂಕ್ಷ್ಮಕೆತ್ತನೆಯ ಪ್ರಯೋಗಶಾಲೆ. ಅದರ ನಟ್ಟ ನಡುವೆ ತ್ರಿ-ತೀರ್ಥರವೂ, ತುತ್ತ ತುದಿಯಲ್ಲಿ ಸಿಂಹ ಲಲಾಟವೂ ಶೋಭಿಸುತ್ತವೆ. ಬಸದಿಯ ಬಲಗಡೆ ಐತಿಹಾಸಿಕ ಮಹತ್ವದ 84 ಪಂಕ್ತಿಗಳ ದೀರ್ಘ ಶಾಸನವಿದೆ. ಇದರಲ್ಲಿ ಬಳಸಿರುವ ಲಿಪಿ ಬಹು ಸುಂದರ ವಿನ್ಯಾಸದಿಂದ ಕೂಡಿದ್ದು ಆ ಕಾಲದ ಅಲಂಕಾರಿಕ ಲಿಪಿಗೆ ಉದಾಹರಣೆಯಾಗಿದೆ. ಶಾಸನದ ತುದಿಯಲ್ಲಿರುವ ಚಿತ್ರ ಪಟ್ಟಿಕೆ ಅನನ್ಯ ಶೋಭೆಯಿಂದ ಪ್ರಜ್ವಲಿಸಿದೆ. ಚಿತ್ರ ಫಲಕದ ಮಧ್ಯೆ ಸಿಂಹಪೀಠದಲ್ಲಿ ಜಿನರು ಕುಳಿತಿದ್ದಾರೆ. ಚಾಮರಧಾರಿಗಳು ಸೇವೆ ಮಾಡುತ್ತಿದ್ದಾರೆ. ತನ್ನ ಭಕ್ತಿಯ ತಾವರೆಯನ್ನು ಸೊಂಡಿಲಲ್ಲಿ ಹಿಡಿದು ಐರಾವತ ಗಜರಾಜನು ನತಮಸ್ತಕನಾಗಲು ಬಲಗಾಲನ್ನು ಮಡಿಚಿರುವ ಚಿತ್ರ ಜಿನರ ಬಲಭಾಗಕ್ಕಿದೆ. ಎಡಗಡೆ ಕಾಮಧೇನುವು ಕರುವಿಗೆ ಹಾಲುಣಿಸುತ್ತಿದೆ. ಈ ಎರಡೂ ಪ್ರಾಣಿಗಳ ಅಲಂಕರಣ ಸೊಗಸಾಗಿದೆ.

About

About Achiyakka Basadi (Akkana Basadi)

Year of establishment
AD 1181
Established by
Achiyakka, wife of Chandramouli and disciple of Balachandra Muni
Main deity
Lord Parshvanatha
Timings
Usually open from 8:00 AM to 6:00 PM
Location
Open map

An inscription records that Achiyakka, wife of Chandramouli—minister of Hoysala king Ballala II—and a disciple of Balachandra Muni, built this Basadi in AD 1181 and endowed the village of Bommanahalli for its upkeep. The Basadi is a fine Hoysala monument, built of soapstone on a star-shaped plan, with a sanctum, sukhanasi, navaranga, and entrance hall. In the sanctum stands a 6-foot-4-inch image of Lord Parshvanatha in kayotsarga posture. Dharanendra is placed to the right and Padmavati to the left. Both four-armed figures are richly ornamented and sit in sukhasana or lalitasana; their attributes include the elephant goad, noose, thunderbolt staff, and citron. The polished dark-blue Shrikara pillars are bell-shaped, and the Bhuvaneshwari ceiling has a finely carved lotus. An approximately eighteen-foot tower rises above the structure; its centre contains a tri-Tirtha composition and its summit bears a lion face. The Basadi’s eighty-four-line inscription is engraved in decorative script. Its sculptural panel includes a seated Jina with fly-whisk bearers, Airavata kneeling with a lotus, and Kamadhenu suckling her calf.